ದಕ್ಷಿಣ ಭಾರತದಲ್ಲೇ ಮೊದಲ ಬಾರಿ ಹೊಲಿಗೆ ರಹಿತ ಹೃದಯ ಕವಾಟ ಬದಲಾವಣೆ

18-Apr-2017

ಸುದ್ದಿಗೋಷ್ಠಿಯಲ್ಲಿ ಬಿಜಿಎಸ್ ಗ್ಲೆನೀಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಥಾಸಿ ಪಿಳ್ಳೈ ಈ ವಿಷಯ ತಿಳಿಸಿದರು. 82 ವರ್ಷ ವಯೋಮಾನದ ಸರಿತಾ (ಹೆಸರು ಬದಲಿಸಿದೆ) ಅವರಿಗೆ ಈ ಚಿಕಿತ್ಸೆ ಮಾಡಲಾಗಿದೆ. ಇವರು 8 ವರ್ಷಗಳ ಹಿಂದೆ ಬೇರೆ ಆಸ್ಪತ್ರೆಯಲ್ಲಿ ಮಹಾಪದಮನಿ ಕವಾಟ ಬದಲಾವಣೆ ನಡೆಸಿಕೊಂಡಿದ್ದರು. ಈ ಕವಾಟ ವಿಫಲಗೊಂಡಿತ್ತು. ಇದು ದೇಹದಲ್ಲಿ ಅಂಗಾಂಗಗಳಿಗೆ ರಕ್ತವನ್ನು ಪಂಪ್ ಮಾಡುವ ಎಡ ಕುಹರದಿಂದ ರಕ್ತದ ಹರಿವಿಗೆ ಅಡ್ಡಿಯುಂಟು ಮಾಡುತ್ತಿತ್ತು. ಇದರಿಂದಾಗಿ ಉಸಿರುಕಟ್ಟಿದಂತಾಗಿ, ಅವರ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿತ್ತು.

ಇದರಿಂದ ಹೃದಯಕ್ಕೆ ದಣಿವಾಗುತ್ತಿತ್ತು. ಚಿಕಿತ್ಸೆ ನೀಡದೇ ಬಿಟ್ಟರೆ, ರೋಗಿ 2- 4 ವರ್ಷಗಳಲ್ಲಿ ಗಂಭೀರ ಹೃದಯ ವೈಫಲ್ಯದಿಂದ ಬಳಲುವ ಅಥವಾ ಸಾವಿಗೀಡಾಗುವ ಸಂಭವ ಇತ್ತು. ಹೃದಯದ ಎಕೋ ಸ್ಕ್ಯಾನ್ ನಡೆಸಿದ ವೇಳೆ ಹಳೆಯ ಕವಾಟದ ಕಾರ್ಯ ವೈಫಲ್ಯ ಬೆಳಕಿಗೆ ಬಂತು. ಇದು ಪಂಪಿಂಗ್ ಚೇಂಬರ್‌ಗೆ ಅಡ್ಡಿಯಾಗಿ ಕವಾಟದ ಮೂಲಕ ರಕ್ತವನ್ನು ಪಡೆಯಲು 120 ಎಂಎಂಹೆಚ್‍ಜಿ ನಷ್ಟು ಒತ್ತಡ ಹಾಕಬೇಕಾಗುತ್ತಿತ್ತು ಎಂದು ಪಿಳ್ಳೈ ವಿವರಿಸಿದರು.

ಕ್ಲಿಷ್ಟಕರ ಸ್ಥಿತಿಯಲ್ಲಿ ರೋಗಿಯನ್ನು ನಮ್ಮ ಆಸ್ಪತ್ರೆಗೆ ಕರೆತರಲಾಗಿತ್ತು. ಅವರು ಈ ಹಿಂದೆ ಎರಡು ಬಾರಿ ಕವಾಟ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪರಿಣಾಮವಾಗಿ, ಹೃದಯವು ಅದರ ಸುತ್ತಲಿನ ಅಂಗಾಂಶಕ್ಕೆ ಜೋಡಿಕೊಂಡಿತ್ತು. ಅದನ್ನು ಹೃದಯಕ್ಕೆ ಹಾನಿಯಾಗದಂತೆ ಜಾಗರೂಕತೆಯಿಂದ ಬಿಡಿಸಬೇಕಿತ್ತು. ವಯಸ್ಸು ಇನ್ನೊಂದು ಅಪಾಯವಾಗಿತ್ತು. ಹೊಲಿಗೆರಹಿತ ಮಹಾಪಧಮನಿ ಕವಾಟ ಬದಲಾವಣೆಯ ಮೂಲಕ ಜೈವಿಕ ಪ್ರಾಸ್ಥೆಟಿಕ್ ಕವಾಟವನ್ನು ಜೋಡಿಸಲಾಗಿದ್ದು, ಇದು ರೋಗಿಗೆ ಕನಿಷ್ಠ ಛೇದನವನ್ನು ಹೊಂದಿರುತ್ತದೆ. ಈ ಶಸ್ತ್ರಚಿಕಿತ್ಸೆ ತ್ವರಿತಗತಿಯಲ್ಲಿ ನಡೆಯಲಿದ್ದು, ಬೇಗನೆ ಚೇತರಿಕೆ ಕಂಡುಬರಲಿದೆ ಎಂದು ವಿವರಿಸಿದರು. ಡಾ.ಥಾಸಿ ಪಿಳ್ಳೈ ನೇತೃತ್ವದಲ್ಲಿ ನಡೆದ ಶಸ್ತ್ರಚಿಕಿತ್ಸೆಯ ತಂಡದಲ್ಲಿ ಡಾ. ಸಂಜಯ್, ಡಾ. ಭಾಸ್ಕರ್ , ಡಾ.ಉಮೇಶ್, ಡಾ. ಶಿವಪ್ರಕಾಶ್ ಮತ್ತು ಡಾ.ಶ್ರೀನಿವಾಸ್ ಇದ್ದರು.